ಬಿಹಾರಿ -
ಬಿಹಾರ ರಾಜ್ಯದಲ್ಲಿ ಮಾತನಾಡುವ ಭೋಜಪುರಿ, ಮಗಹಿ ಮತ್ತು ಮೈಥಿಲಿ ಎಂಬ ಮೂರು ಉಪಭಾಷೆಗಳ ಸಮುದಾಯ. ಈ ಮೂರರ ಪೈಕಿ ಮೈಥಿಲಿಯಲ್ಲಿ ಪ್ರಾಚೀನ ಸಾಹಿತ್ಯವುಂಟು. ವಿದ್ಯಾಪತಿ ಮೈಥಿಲಿಯ ಹೆಸರಾಂತ ಕವಿ. ಹಿಂದಿ ಪ್ರದೇಶದ ಇತರ ಅನೇಕ ಉಪಭಾಷೆಗಳಂತೆ ಭೋಜಪುರಿ ಮತ್ತು ಮಗಹಿಗಳಲ್ಲಿ ಭಾವಗೀತೆಗಳೂ ಜನಪದ ಕಥೆಗಳೂ ಪ್ರಚುರವಾಗಿವೆ. ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರಪ್ರಸಾದರ ಮನೆಮಾತು ಭೋಜಪುರಿಯೆ. ಬಿಹಾರ್ ರಾಜ್ಯದ ಅಧಿಕೃತ ಭಾಷೆ ಹಿಂದಿಯಾದರೂ ಜನಸಮುದಾಯ ಬಳಸುವುದು ಬಿಹಾರಿಯನ್ನೇ. 

	ಸಂರಚನಾತ್ಮಕವಾಗಿ ಬಿಹಾರಿ ಇಂಡೊ-ಆರ್ಯನ್ ಭಾಷಾವರ್ಗಕ್ಕೆ ಸೇರಿದ್ದು ಅಸ್ಸಾಮಿ, ಬಂಗಾಳಿ ಮತ್ತು ಒರಿಯ ಭಾಷೆಗಳೊಂದಿಗೆ ನಿಕಟ ಸಂಬಂಧ ಪಡೆದಿದೆ. ಹಿಂದಿ ಭಾಷೆಯ ಪ್ರಭಾವ ಕ್ರಮೇಣ ಹೆಚ್ಚುತ್ತಿದೆ. ಐತಿಹಾಸಿಕವಾಗಿ ಬಿಹಾರಿ ಮಾಗಧೀ ಪ್ರಾಕೃತದಿಂದ ಕವಲೊಡೆದದ್ದು. ಆದರೆ ಸಾಹಿತ್ಯಕ ಮಾಗಧಿಯ ಎರಡು ಮುಖ್ಯ ಲಕ್ಷಣಗಳು (ತಾಲವ್ಯ ಊಷ್ಮಧ್ವನಿ ಮತ್ತು ಲಕಾರ ರಕಾರದ ಸ್ಥಾನವನ್ನಾಕ್ರಮಿಸುವುದು) ಬಿಹಾರಿಯಲ್ಲಿ ಕಂಡುಬರುವುದಿಲ್ಲ. 

	ಬಿಹಾರಿ ಶಿಷ್ಟಹಿಂದಿಗಿಂತ ತುಂಬ ಭಿನ್ನವಾದುದು. ಅದರಲ್ಲಿ ಡ (x) ಮತ್ತು ಢ (ಡಿh) ರೂಪಗಳಿಲ್ಲ ಮತ್ತು ಹೊರವಲಯದ ಇಂಡೊಆರ್ಯನ್ ಭಾಷೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತೆ -ಲ ಅಂತ್ಯವುಳ್ಳ ಭೂತಕೃದಂತ ರೂಪ ಕಂಡುಬರುತ್ತದೆ.

	ಬಿಹಾರಿ ಉಪಭಾಷೆಗಳ ಬರವಣಿಗೆಗೆ ಮೂರು ಲಿಪಿಗಳನ್ನು ಉಪಯೋಗಿಸುವುದುಂಟು. ಮುದ್ರಣ ಮುಂತಾದ ಕೆಲಸಗಳಿಗಾಗಿ ದೇವನಾಗರಿ ಹಾಗೂ ಸಾಮಾನ್ಯ ಬರವಣಿಗೆಗಾಗಿ ಕೈಥೀ ಬಯಕೆಯಲ್ಲಿವೆ. ಮೈಥಿಲಿ ಬ್ರಾಹ್ಮಣರು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಮೈಥಿಲಿ ಲಿಪಿಯೇ ಬೇರೆ. 										
(ಎಸ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ